ಕಲಬುರಗಿ: ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ 'ಹಿಂದುಸ್ಥಾನ್ ಸೆಕ್ಯೂರಿಟಿ ಸರ್ವೀಸಸ್' ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತಿರುವ ಕೆಲವು ಹೊರಗುತ್ತಿಗೆ ನೌಕರರಿಗೆ ಕಳೆದ 10 ರಿಂದ 12 ತಿಂಗಳುಗಳಿಂದ ನಿಯಮಿತ ವೇತನ ಪಾವತಿಯಾಗಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು 'ಜಯ ಕರ್ನಾಟಕ ಜನಪದ ವೇದಿಕೆ'ಯು ದೂರು ಸಲ್ಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದೆ.
ಮಾಸಿಕ ಸಂಬಳವನ್ನೇ ನಂಬಿಕೊಂಡಿರುವ ನೌಕರರ ಕುಟುಂಬಗಳು ಮನೆ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ವೈದ್ಯಕೀಯ ಚಿಕಿತ್ಸೆಗಳಿಗಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದು ಸಂಘಟನೆಯವರು ಕಳವಳ ವ್ಯಕ್ತಪಡಿಸಿದ್ದಾರೆ.
ಹೊರಗುತ್ತಿಗೆ ಸಂಸ್ಥೆಯ ದೂರವಾಣಿ ಸಂಖ್ಯೆಗೆ ಹಲವು ಬಾರಿ ಕರೆ ಮಾಡಿದರೂ ಯಾರೂ ಸ್ವೀಕರಿಸಿಲ್ಲ. ಕಚೇರಿಯಲ್ಲಿ ಹಾಜರಾತಿ, ವೇತನ ಪಾವತಿ, ಇಲಾಖೆಯಿಂದ ಸಂಸ್ಥೆಗೆ ಬಿಡುಗಡೆಯಾದ ಹಣ, ಬಿಲ್ ಹಾಗೂ PF/ESI ದಾಖಲೆಗಳನ್ನು ಕೇಳಿದರೂ ನೀಡಲಾಗಿಲ್ಲ. ನಿಯಮಿತ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿದ್ದರೂ, ಹೊರಗುತ್ತಿಗೆ ನೌಕರರಿಗೆ 10-12 ತಿಂಗಳ ವೇತನ ಬಾಕಿ ಉಳಿಸಿಕೊಂಡಿರುವುದು ಕಾರ್ಮಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.


