ರಸ್ತೆ ಅಪಘಾತ: 8 ವಿದೇಶಿ ಪ್ರಯಾಣಿಕರ ಸ್ಥಿತಿ ಗಂಭೀರ

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ರಸ್ತೆ ಅಪಘಾತ: 8 ವಿದೇಶಿ ಪ್ರಯಾಣಿಕರ ಸ್ಥಿತಿ ಗಂಭೀರ

ಅಂಕೋಲಾ :  ಲಾರಿ‌ ಮತ್ತು ಬಸ್ ಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ವಿದೇಶಿ ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗಳಾದ ಘಟನೆ ರಾಷ್ಟ್ರೀಯ ಹೆದ್ದಾರಿ 52 ಸುಂಕಸಾಳ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಅಪಘಾತದಲ್ಲಿ ಒಟ್ಟು 28 ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳ ಪೈಕಿ 12 ಜನರು ವಿದೇಶಿ ಪ್ರಜೆಗಳಾಗಿದ್ದು ಅದರಲ್ಲಿ 8 ವಿದೇಶಿ ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಅಂಕೋಲಾ ಮಾರ್ಗದಿಂದ ಹುಬ್ಬಳ್ಳಿ ಕಡೆಗೆ ಸಂಚರಿಸುತ್ತಿದ್ದ ಲಾರಿ ಹಾಗೂ ಹಂಪಿಯಿಂದ ಗೋವಾಕ್ಕೆ ತೆರಳುತ್ತಿದ್ದ ಸಿಬರ್ಡ್ ಬಸ್ ಮುಖಾಮುಖಿ ಡಿಕ್ಕಿ ನಡೆದಿದ್ದು ಹಿಂಬದಿಯಲ್ಲಿ ಬರುತ್ತಿದ್ದ   ಗಣೇಶ್ ಟ್ರಾವೆಲ್ಸ್ ಖಾಸಗಿ ಬಸ್ ಡಿಕ್ಕಿಯಾಗಿದೆ.  ಪರಿಣಾಮವಾಗಿ ಮೂರೂ ವಾಹನಗಳು ಜಖಂಗೊಂಡಿದೆ. ಅಪಘಾತದ ತೀವ್ರತೆಗೆ  ಇಬ್ಬರು ಬಸ್ ಚಾಲಕರ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.  

ಅಪಘಾತದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ಬಸ್ಸಿನಿಂದ ಹೊರತೆಗೆಯಲು ಹರಸಾಹಸ ಪಟ್ಟರು. ಅಂಕೋಲಾ ತಾಲೂಕಾಸ್ಪತ್ರೆಗೆ  ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ರಸ್ತೆಯ ಮಧ್ಯದಲ್ಲೇ ವಾಹನಗಳು ಸಿಲುಕಿಕೊಂಡಿದ್ದರಿಂದ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.

ಅಂಕೋಲಾ ಪೊಲೀಸರು ಮತ್ತು ಸುಂಕಸಾಳ ಹೊರಠಾಣೆ ಪೊಲ್ಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.