ನಿರ್ಣಾ ಗ್ರಾಮದ ಪೆಟ್ರೋಲ್ ಪಂಪ್ ಕಚೇರಿಯಲ್ಲಿ ಅಗ್ನಿ ಅವಘಡ: ವ್ಯಕ್ತಿ ಸಜೀವ ದಹನ

ವರದಿಗಾರರುAdmin
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
 ನಿರ್ಣಾ ಗ್ರಾಮದ ಪೆಟ್ರೋಲ್ ಪಂಪ್ ಕಚೇರಿಯಲ್ಲಿ ಅಗ್ನಿ ಅವಘಡ: ವ್ಯಕ್ತಿ ಸಜೀವ ದಹನ

ಬೀದರ್ ಬ್ರೇಕ್

ನಿರ್ಣಾ ಗ್ರಾಮದ ಪೆಟ್ರೋಲ್ ಪಂಪ್ ಕಚೇರಿಯಲ್ಲಿ ಅಗ್ನಿ ಅವಘಡ: ವ್ಯಕ್ತಿ ಸಜೀವ ದಹನ

ದಸರಾ ರಜೆಯ ವೇಳೆ ಸಂಭವಿಸಿದ ದುರ್ಘಟನೆ; ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್‌ಗೆ ಬೆಂಕಿ ತಗುಲದೆ ತಪ್ಪಿದ ಭಾರೀ ಅನಾಹುತ

ಚಿಟಗುಪ್ಪಾ: ನಾಡಹಬ್ಬ ದಸರಾ ಸಂಭ್ರಮದ ನಡುವೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದಲ್ಲಿರುವ ಚನ್ನಬಸವ ಪೆಟ್ರೋಲ್ ಪಂಪ್‌ನ ಕಚೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಒಳಗೆ ಮಲಗಿದ್ದ ಬಾಲಾಜಿ ದಾಸೂರ ಎಂಬ ವ್ಯಕ್ತಿ ಸಜೀವ ದಹನಗೊಂಡಿರುವ ದಾರುಣ ಘಟನೆ ನಡೆದಿದೆ.

ದಸರಾ ಹಬ್ಬದ ನಿಮಿತ್ತ ಪೆಟ್ರೋಲ್ ಪಂಪ್‌ನ ಸಿಬ್ಬಂದಿ ರಜೆಯಲ್ಲಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಚೇರಿಯೊಳಗೆ ಬಾಲಾಜಿ ದಾಸೂರ ಒಬ್ಬರೇ ಮಲಗಿದ್ದಾಗ, ಬುಧವಾರ ಬೆಳಗಿನ ಜಾವ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಬೆಂಕಿ ಕ್ಷಿಪ್ರವಾಗಿ ವ್ಯಾಪಿಸಿದ ಪರಿಣಾಮ ಒಳಗೆ ಮಲಗಿದ್ದ ಬಾಲಾಜಿ ದಾಸೂರ ಅವರು ಹೊರಬರಲಾಗದೆ ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಪೆಟ್ರೋಲ್ ಪಂಪ್‌ನ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೂ, ಪಕ್ಕದಲ್ಲೇ ಇದ್ದ ಪೆಟ್ರೋಲ್ ಬಂಕ್‌ಗೆ ಬೆಂಕಿ ವ್ಯಾಪಿಸದಿರುವುದು ಸಮಾಧಾನಕರ ಸಂಗತಿಯಾಗಿದೆ. ಬೆಂಕಿ ಪೆಟ್ರೋಲ್ ಬಂಕ್‌ಗೆ ತಗುಲಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.

ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ

ಘಟನಾ ಸ್ಥಳಕ್ಕೆ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಮನ್ನಾಏಖೆಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.