ಬೀದರ : ರೈತರ ಜೀವನಾಡಿಯಾಗಿರುವ ಬಿಎಸ್ಎಸ್ಕೆ ಸಕ್ಕರೆ ಕಾರ್ಖಾನೆಯ ಹರಾಜು ಪ್ರಕ್ರಿಯೆಯನ್ನು ತಡೆದು, ಕಾರ್ಖಾನೆಯನ್ನು ಲೀಜ್ಗೆ ನೀಡಿ ಪುನಶ್ಚೇತನಗೊಳಿಸುವಂತೆ ಶಾಸಕ ಡಾ. ಸಿದ್ದು ಪಾಟೀಲ,ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು, ಸಕ್ಕರೆ ಮತ್ತು ಜವಳಿ ಇಲಾಖೆಯ ಸಚಿವರಾದ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಮನವಿ ಸಲ್ಲಿಸಿದರು.
ಬಿಎಸ್ಎಸ್ಕೆ ಕಾರ್ಖಾನೆ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವುದರಿಂದ ಈ ಭಾಗದ ಕಬ್ಬು ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಖಾನೆ ಪುನರಾರಂಭಗೊಂಡರೆ ಬೀದರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಕಬ್ಬು ಬೆಳೆಗಾರರಿಗೆ ಸ್ಥಳೀಯವಾಗಿ ಮಾರುಕಟ್ಟೆ ದೊರೆಯುವುದರ ಜೊತೆಗೆ ಸಾಗಾಣಿಕೆ ವೆಚ್ಚವೂ ಕಡಿಮೆಯಾಗಲಿದೆ. ಅಲ್ಲದೆ, ಕಾರ್ಖಾನೆಯನ್ನು ಅವಲಂಬಿಸಿರುವ ಕಾರ್ಮಿಕರು ಹಾಗೂ ಸಾವಿರಾರು ಕುಟುಂಬಗಳಿಗೆ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳು ದೊರೆಯಲಿವೆ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು.
ಬಿಎಸ್ಎಸ್ಕೆ ಕಾರ್ಖಾನೆಯನ್ನು ಹರಾಜು ಮಾಡುವ ಬದಲು ಸೂಕ್ತ ಸಂಸ್ಥೆಗೆ ಲೀಜ್ ಆಧಾರದ ಮೇಲೆ ನೀಡಿ ವೈಜ್ಞಾನಿಕ ಹಾಗೂ ಆರ್ಥಿಕವಾಗಿ ಪುನಶ್ಚೇತನಗೊಳಿಸುವುದು ರೈತರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಸೂಕ್ತ ಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.


