ಹುಮನಾಬಾದ: ಬೀದರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್‌ಫೇಸಿ ಕಾಯ್ದೆ 2002ರ ಅಡಿ ಮರು ಹರಾಜು ಮಾಡಲು ಮುಂದಾಗಿರುವ ಬೀದರ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕಿನ ಕ್ರಮವನ್ನು ತಕ್ಷಣವೇ ತಡೆಹಿಡಿಯಬೇಕೆಂದು ಆಗ್ರಹಿಸಿ ಮಾಜಿ ಸಚಿವ ರಾಜಶೇಖರ ಪಾಟೀಲ ಹಾಗೂ ಎಂಎಲ್ಸಿ ಡಾ. ಚಂದ್ರಶೇಖರ ಪಾಟೀಲ ಅವರು ಸಹಕಾರ ಸಚಿವ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹಳ್ಳಿಖೇಡ (ಬಿ)ಯಲ್ಲಿರುವ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ನಿ. ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಡಿಸಿಸಿ ಬ್ಯಾಂಕ್ ಪತ್ರಿಕಾ ಪ್ರಕಟಣೆ ನೀಡಿದ್ದು, ದಿನಾಂಕ 02-09-2026ರಂದು ಮಧ್ಯಾಹ್ನ 02:00 ಗಂಟೆಗೆ ಹರಾಜು ನಡೆಸಲು ದಿನಾಂಕ ನಿಗದಿಪಡಿಸಿದೆ. ಆದರೆ, ಕಾರ್ಖಾನೆಯ ಬಿಕ್ಕಟ್ಟು ಹಾಗೂ ಸಮಸ್ಯೆಗಳ ಕುರಿತು ದಿನಾಂಕ 18-12-2024 ರಂದೇ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರ ಅಧ್ಯಕ್ಷತೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು, ಪೌರಾಡಳಿತ ಹಾಗೂ ಹಜ್ ಸಚಿವರು ಮತ್ತು ಬೀದರ ಜಿಲ್ಲೆಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮಹತ್ವದ ಸಭೆ ನಡೆದಿತ್ತು. ಆ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಹಮ್ಮಿಕೊಂಡಿದ್ದ ಹರಾಜು ಪ್ರಕ್ರಿಯೆಯನ್ನು ತಡೆಹಿಡಿದು, ಕಾರ್ಖಾನೆಯನ್ನು ಲೀಜ್‌ಗೆ ನೀಡಲು ತೀರ್ಮಾನಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು LROT (ರೈಸ್, ಆಪರೇಟ್ ಅಂಡ್ ಟ್ರಾನ್ಸ್‌ಫರ್) ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆಗೆ ನೀಡುವುದರಿಂದ ಕಾರ್ಖಾನೆಯ ಪುನಶ್ಚೇತನ ಸಾಧ್ಯವಾಗುತ್ತದೆ. ಇದರಿಂದ ಕಬ್ಬು ಬೆಳೆಗಾರ ರೈತರು, ಕಾರ್ಖಾನೆಯ ಕಾರ್ಮಿಕರು, ಸಾಲ ನೀಡಿರುವ ಇತರ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಹಿತರಕ್ಷಣೆ ಆಗಲಿದ್ದು, ರಾಜ್ಯದ ಆರ್ಥಿಕತೆಗೂ ನೆರವಾಗಲಿದೆ.

