ಚಿಂಚೋಳಿ: ಇಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಆಯುರ್ವೇದ ಪದ್ಧತಿಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡುತ್ತಿದ್ದು, ಜನರು ಆಯುರ್ವೇದ ಔಷಧಿಗಳು ಹಾಗೂ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಹೇಳಿದರು.
ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 'ರಾಷ್ಟ್ರೀಯ ಆಯುಷ್ ಅಭಿಯಾನ'ದಡಿ ಏರ್ಪಡಿಸಲಾಗಿದ್ದ ಉಚಿತ ಆಯುಷ್ ವಿಶೇಷ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಜರು ಬಳಸಿ ಬೆಳೆಸಿದ ಆಯುರ್ವೇದವು ಕೇವಲ ರೋಗ ನಿವಾರಣೆಯಷ್ಟೇ ಅಲ್ಲದೆ, ರೋಗ ಬಾರದಂತೆ ತಡೆಯುವ ಶಕ್ತಿಯನ್ನೂ ಹೊಂದಿದೆ. ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಗಳನ್ನೇ ಆಧರಿಸಿದ ಈ ಪದ್ಧತಿ ದೇಹದ ಸಂಪೂರ್ಣ ಆರೈಕೆಗೆ ಪೂರಕವಾಗಿದೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಆಯುರ್ವೇದ ಪದ್ದತಿಗಳು ಅನುಸರಿಸಬೇಕು. ಉಚಿತ ತಪಾಸಣೆ ಮತ್ತು ಆಯುಷ್ ಇಲಾಖೆಯ ಯೋಜನೆಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

