ಲಂಚ ಸ್ವೀಕರಿಸುತ್ತಿದ್ದ ಯಡ್ರಾಮಿ ಪಿಎಸ್‌ಐ ಲೋಕಾಯುಕ್ತ ಬಲೆಗೆ.

Lead AnalystSite Administrator
Release DateJune 19, 2026
Intel Density5 min read
Signal Output:
ಲಂಚ ಸ್ವೀಕರಿಸುತ್ತಿದ್ದ ಯಡ್ರಾಮಿ ಪಿಎಸ್‌ಐ ಲೋಕಾಯುಕ್ತ ಬಲೆಗೆ.

ಯಡ್ರಾಮಿ: ಅಕ್ಕಿ ವ್ಯಾಪಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಲಂಚ ಪಡೆಯುತ್ತಿದ್ದಾಗ ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಹಾಗೂ ಡ್ಯೂಟಿ ಕಾನ್ಸ್ ಟೇಬಲ್ ಸಿದ್ದಣ್ಣ ಬಿರಾದಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಘಟನೆ ಗುರುವಾರ ನಡೆದಿದೆ.

ಆನಂದ ಕುಸ್ತಿ ಎಂಬುವರ ಸಂಬಂಧಿಕರಿಂದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸಹಕಾರ ನೀಡುವುದಾಗಿ ಹೇಳಿ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಮುಂಗಡವಾಗಿ ಜೂನ್ 12ರಂದು 20ಸಾವಿರ ರೂ. ಅನ್ನು ಫೋನ್‌ಪೇ ವೇ ಮೂಲಕ ಸ್ವೀಕರಿಸಿದ್ದರೆಂದು ತಿಳಿದುಬಂದಿದೆ. ಬಳಿಕ ಮತ್ತಷ್ಟು ರೂ. 30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಅದರ ಪೈಕಿ ಗುರುವಾರ ಯಡ್ರಾಮಿ ಪೊಲೀಸ್ ಠಾಣೆ ಆವರಣದಲ್ಲಿ 20 ಸಾವಿರ ರೂ. ಸ್ವೀಕರಿಸುತ್ತಿದ್ದ ವೇಳೆ  ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ಗಂಭೀರ ಪ್ರಕರಣಗಳ ತನಿಖೆ ಹಾಗೂ ಆರೋಪಿಗಳ ಬಂಧನದಲ್ಲಿ ತೋರಿದ ಕಾರ್ಯಕ್ಷಮತೆಗಾಗಿ ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಅವರು 2024-25 ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದಿದ್ದರು.

ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅರುಣ್ ಮರಗುಂಡಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮಲ್ಲಿನಾಥ, ರಾನೋಜಿ ಬಸವರಾಜ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.