ಬೆಂಗಳೂರು: ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿರುವ ಇರಾನ್ ಯುದ್ಧದ ಪರಿಣಾಮ ಕೇವಲ ಮೂರು ದಿನಗಳ ಅವಧಿಯಲ್ಲಿ ಇದು ಎರಡನೇ ಬಾರಿ ಸಾರ್ವಜನಿಕ ವಲಯದ ತೈಲ ಕಂಪನಿಗಳು ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ಸುಮಾರು 90 ಪೈಸೆಗಳಷ್ಟು ಹೆಚ್ಚಳ ಮಾಡಿವೆ. ದರ ಪರಿಷ್ಕರಣೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಕಳೆದ ಶುಕ್ರವಾರವಷ್ಟೇ (ಮೇ 15) ತೈಲ ಕಂಪನಿಗಳು ಪ್ರತಿ ಲೀಟರ್ ಇಂಧನಕ್ಕೆ ಬರೊಬ್ಬರಿ 3 ರೂಪಾಯಿ ಹೆಚ್ಚಳ ಮಾಡಿದ್ದವು. ಈ ಬರೆ ಮಾಸುವ ಮುನ್ನವೇ ಸಾರ್ವಜನಿಕರಿಗೆ ಮತ್ತೊಂದು ದರ ಏರಿಕೆಯ ಶಾಕ್ ನೀಡಲಾಗಿದೆ.
ದರ ಏರಿಕೆಗೆ ಕಾರಣವೇನು? ಪಶ್ಚಿಮ ಏಷ್ಯಾದಲ್ಲಿ, ಪ್ರಮುಖವಾಗಿ ಇರಾನ್‌ನಲ್ಲಿ ನಡೆಯುತ್ತಿರುವ ಭೀಕರ ಯುದ್ಧದಿಂದಾಗಿ ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿನೇ ದಿನೇ ಏರುತ್ತಿದೆ.

