ಜೂ.21ರಂದು ನೀಟ್-ಯುಜಿ ಮರು ಪರೀಕ್ಷೆ

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಜೂ.21ರಂದು ನೀಟ್-ಯುಜಿ ಮರು ಪರೀಕ್ಷೆ

ನವದೆಹಲಿ: ವೈದ್ಯಕೀಯ ಕೋರ್ಸುಗಳಿಗೆ ನಡೆಸಲಾಗುವ ನೀಟ್-ಯುಜಿ ಮರು ಪರೀಕ್ಷೆಯನ್ನು ಜೂ.21ರಂದು ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಸುಮಾರು 23 ಲಕ್ಷ ವಿದ್ಯಾರ್ಥಿಗಳು ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬೆನ್ನಲ್ಲೇ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಹೊಸ ದಿನಾಂಕ ನಿಗದಿ ಮಾಡಲಾಗಿದೆ.

ಶುಕ್ರವಾರ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, 'ವಿದ್ಯಾರ್ಥಿಗಳ ಭವಿಷ್ಯವು ಕೇಂದ್ರದ ಪ್ರಥಮ ಆದ್ಯತೆಯಾಗಿದೆ. ನೀಟ್ ಯುಜಿ ಮರು ಪರೀಕ್ಷೆಯಲ್ಲಿ ಯಾವುದೇ ರೀತಿ ಅಕ್ರಮಕ್ಕೆ ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿದೆ. ಯಾರಾದರೂ ಅಕ್ರಮಕ್ಕೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಸಿದ್ದಾರೆ.

ಪರೀಕ್ಷೆ ಅವಧಿ 15 ನಿಮಿಷ ವಿಸ್ತರಣೆ

ಜೂ.21ರಂದು ನೀಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯ ಅವಧಿಯನ್ನು 15 ನಿಮಿಷಗಳ ಕಾಲ ವಿಸ್ತರಿಸಲಾಗಿದೆ. ಅಂದರೆ, ಪರೀಕ್ಷೆಯು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯ ಬದಲಾಗಿ, 5.15ರವರೆಗೆ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ. ಜತೆಗೆ ವಿದ್ಯಾರ್ಥಿಗಳು ತಮಗೆ ಬೇಕಾದ ಪರೀಕ್ಷಾ ನಗರಗಳನ್ನು ಮತ್ತೆ ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನೂ ನೀಡಲಾಗಿದೆ. ಜತೆಗೆ, ಜೂ.14ರೊಳಗೇ ವಿದ್ಯಾರ್ಥಿಗಳಿಗೆ ಹೊಸದಾಗಿ ಪ್ರವೇಶ ಪತ್ರಗಳನ್ನು ನೀಡಲಾಗುತ್ತದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಸಾರಿಗೆ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದೂ ಪ್ರಧಾನ್ ಹೇಳಿದ್ದಾರೆ.