ಬಸವಕಲ್ಯಾಣ: ಹೂಗಾರ ಪರಂಪರೆಯು ಅತ್ಯಂತ ಶ್ರೇಷ್ಠವಾದುದಾಗಿದೆ. ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜದ ಸಂಘಟನೆಗಾಗಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ಅಖಿಲ ಕರ್ನಾಟಕ ಹೂಗಾರ ಸಮಾಜದ ಗೌರವ ಸಲಹೆಗಾರರಾದ ಡಾ. ಬಸವರಾಜ ಹೂಗಾರ ಮೀನಕೇರಾ ಕರೆ ನೀಡಿದರು.
ನಗರದ ಐತಿಹಾಸಿಕ ಅನುಭವ ಮಂಟಪದಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾದ ವತಿಯಿಂದ ರವಿವಾರ ಆಯೋಜಿಸಲಾಗಿದ್ದ ಬೀದರ ಜಿಲ್ಲಾ ಹೂಗಾರ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸಮಾಜದ ಬೃಹತ್ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಹೂಗಾರ ಸಮಾಜದ ಬಂಧುಗಳು ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ನಿಸ್ಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲ ಶಕ್ತಿಯನ್ನು ಸಂಘಟನೆಯ ಮೂಲಕ ಒಂದೇ ವೇದಿಕೆಗೆ ತರುವ ಮಹತ್ತರ ಕೆಲಸವಾಗಬೇಕಿದೆ. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಸಂಘಟನಾತ್ಮಕ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿ, ಸಮಾಜಕ್ಕೆ ಹೊಸ ಶಕ್ತಿ ತುಂಬಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹೂಗಾರ, ರಾಜ್ಯ ಸಹಕಾರ್ಯದರ್ಶಿ ದುರ್ಯೋಧನ ಹೂಗಾರ ಅವರು, ಕೇವಲ ಅಧಿಕಾರದ ಆಸೆಯಿಂದ ಇರುವವರಿಂದ ಸಮಾಜ ಸಂಘಟನೆ ಸಾಧ್ಯವಿಲ್ಲ. ಸಮಾಜಮುಖಿ ಮನಸ್ಥಿತಿ ಹೊಂದಿದ ವ್ಯಕ್ತಿಗಳಿಂದ ಮಾತ್ರ ಸಂಘಟನೆ ಮತ್ತು ಸಮಾಜದ ನೈಜ ಅಭಿವೃದ್ಧಿ ಸಾಧ್ಯ. ವ್ಯಕ್ತಿಗಳು ಶಾಶ್ವತವಲ್ಲ, ಆದರೆ ಸಮಾಜ ಎಂದೆಂದಿಗೂ ಮುನ್ನಡೆಯುತ್ತಿರುತ್ತದೆ. ಆದ್ದರಿಂದ ಸಿಕ್ಕ ಅಧಿಕಾರದ ಅವಧಿಯಲ್ಲಿ ಸಮಾಜದ ಏಳಿಗೆಗಾಗಿ ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾಧ್ಯಕ್ಷ ರಾಜಕುಮಾರ ಹೂಗಾರ ಸಂಘಟನೆಯ ತತ್ವ ಸಿದ್ಧಾಂತ ಕುರಿತು ಮಾತನಾಡಿ, ನಂತರ ಜಿಲ್ಲಾ ಘಟಕದ ಪದಾಧಿಕಾರಿಗಳ ಘೊಷಣೆ ಮಾಡಿದರು. ಗೌರವ ಅಧ್ಯಕ್ಷರಾದ ರೇವಣಪ್ಪ ಹೂಗಾರ, ರಾಜ್ಯ ಕಾರ್ಯಕಾರಣಿ ಸದಸ್ಯ ಕಾಶಿನಾಥ ಹೂಗಾರ ಮಾತನಾಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾ ಸಭಾ ಬೀದರ ಘಟಕದ ಉಪಾಧ್ಯಕ್ಷರಾಗಿ ವಿಜಯಕುಮಾರ ಹೂಗಾರ ಹಳ್ಳಿಖೇಡ(ಬಿ), ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ಹೂಗಾರ್ ಶ್ರೀಮಂಡಲ ಭಾಲ್ಕಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ರಾಜೇಂದ್ರ ಹೂಗಾರ ಗೌರ್, ಬಸವರಾಜ ಹೂಗಾರ ಕಂದಗುಳ, ಜಿಲ್ಲಾ ಸಹ ಕಾರ್ಯದರ್ಶಿಗಳಾಗಿ ಜಗನ್ನಾಥ್ ಹೂಗಾರ, ದಿಲೀಪ್ ರಾಂಪುರ್, ಸಂತೋಷ ಹೂಗಾರ, ಖಜಾಂಚಿಯಾಗಿ ಶಿವಪುತ್ರಪ್ಪ ಹೂಗಾರ ಖೇಳಗಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ರಾಜಶೇಖರ್ ಹೂಗಾರ್ ಚಟ್ನಳ್ಳ, ಗೌರವ ಸಲಹೆಗಾರರಾಗಿ ಸೂರ್ಯಕಾಂತ್ ಪುಲಾರಿ ಔರಾದ್, ಶಿವಕುಮಾರ ಹೂಗಾರ ಬೀದರ, ವಿಜಯಕುಮಾರ ಹೂಗಾರ ಬೀದರ, ಡಾ. ಬಸವರಾಜ ಹೂಗಾರ ಮೀನಕೇರಾ, ನಾಗಭೂಷಣ ಹುಗ್ಗೆ, ನಿರಂಜನಪ್ಪ ಹೂಗಾರ ತಾಳಮಡಗಿ, ಲಕ್ಷ್ಮೀಬಾಯಿ ಹೂಗಾರ, ನಾಗಭೂಷಣ್ ಹೂಗಾರ ಅವರನ್ನು ಹೆಸರುಗಳು ಘೋಷಣೆ ಮಾಡಿ ಸನ್ಮಾನಿಸಿದರು.