ಚಿಂಚೋಳಿ: ಆಯುರ್ವೇದ ಚಿಕಿತ್ಸೆ ಮತ್ತು ಔಷಧಿಗಳಿಗೆ ಜನರಿಂದ ಹೆಚ್ಚಿನ ಆದ್ಯತೆ - ತಹಶೀಲ್ದಾರ ಸುಬ್ಬಣ್ಣ ಜಮಖಂಡಿ

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಚಿಂಚೋಳಿ: ಆಯುರ್ವೇದ ಚಿಕಿತ್ಸೆ ಮತ್ತು ಔಷಧಿಗಳಿಗೆ ಜನರಿಂದ ಹೆಚ್ಚಿನ ಆದ್ಯತೆ - ತಹಶೀಲ್ದಾರ ಸುಬ್ಬಣ್ಣ ಜಮಖಂಡಿ

ಚಿಂಚೋಳಿ: ಇಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಆಯುರ್ವೇದ ಪದ್ಧತಿಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡುತ್ತಿದ್ದು, ಜನರು ಆಯುರ್ವೇದ ಔಷಧಿಗಳು ಹಾಗೂ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಹೇಳಿದರು.

ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 'ರಾಷ್ಟ್ರೀಯ ಆಯುಷ್ ಅಭಿಯಾನ'ದಡಿ ಏರ್ಪಡಿಸಲಾಗಿದ್ದ ಉಚಿತ ಆಯುಷ್ ವಿಶೇಷ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪೂರ್ವಜರು ಬಳಸಿ ಬೆಳೆಸಿದ ಆಯುರ್ವೇದವು ಕೇವಲ ರೋಗ ನಿವಾರಣೆಯಷ್ಟೇ ಅಲ್ಲದೆ, ರೋಗ ಬಾರದಂತೆ ತಡೆಯುವ ಶಕ್ತಿಯನ್ನೂ ಹೊಂದಿದೆ. ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಗಳನ್ನೇ ಆಧರಿಸಿದ ಈ ಪದ್ಧತಿ ದೇಹದ ಸಂಪೂರ್ಣ ಆರೈಕೆಗೆ ಪೂರಕವಾಗಿದೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಆಯುರ್ವೇದ ಪದ್ದತಿಗಳು ಅನುಸರಿಸಬೇಕು. ಉಚಿತ ತಪಾಸಣೆ ಮತ್ತು ಆಯುಷ್ ಇಲಾಖೆಯ ಯೋಜನೆಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ಉಮಾಶಂಕರ ಮಠ ಅವರು ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಆಯುಷ್ ಇಲಾಖೆಯ ಯೋಜನೆಗಳು ಮತ್ತು ಆಯುರ್ವೇದ ಉಚಿತ ಆರೋಗ್ಯ ಶಿಬಿರಗಳ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಈ ವಿಶೇಷ ಆರೋಗ್ಯ ಶಿಬಿರದಲ್ಲಿ ಸುಮಾರು 350ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅಲ್ಲದೆ,  ಉಚಿತವಾಗಿ ಆಯುರ್ವೇದ ಔಷಧಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ವೈದ್ಯರಾದ ಡಾ. ಸುಶೀಲಕುಮಾರ, ಡಾ. ರವಿಗಿರಿ, ಡಾ. ಚಾಮುಂಡಿ, ಕಂದಾಯ ಇಲಾಖೆಯ ಸಿಬ್ಬಂದಿಗಳಾದ ಅಶೋಕ್ ಕುಲಕರ್ಣಿ, ಸರೋಜಾ, ಶಶಿಧರ ಸ್ವಾಮಿ, ಪ್ರಮುಖ ಮುಖಂಡರಾದ ಕೆ. ಎಮ್. ಬಾರಿ, ಶ್ರೀಮಂತ ಕಟ್ಟಿಮನಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಓಂಕಾರ, ನಸ್ರೀನ್ ಬೇಗಂ, ಅಮನ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.