ಶಿಕ್ಷಕರಿಗೆ ಟಿಇಟಿ ಕಡ್ಡಾಯ: ಸರ್ಕಾರದ ಮಧ್ಯಸ್ಥಿಕೆಗೆ ಆಗ್ರಹ

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಶಿಕ್ಷಕರಿಗೆ ಟಿಇಟಿ ಕಡ್ಡಾಯ: ಸರ್ಕಾರದ ಮಧ್ಯಸ್ಥಿಕೆಗೆ ಆಗ್ರಹ

ಬೀದರ: ಶಿಕ್ಷಕರಿಗೆ 'ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅನ್ವಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನ ಮರು ಪರಿಶೀಲನೆ ಕುರಿತು ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಒತ್ತಾಯಿಸಿದೆ.

ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ನಿಯೋಗದಲ್ಲಿ ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು 2026ರ ಮೇ 29ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಕ ಪರಿಷತ್ 2010ಕ್ಕೆ ಮುಂಚೆ ಶಿಕ್ಷಕರಾಗಿ ನೇಮಕಗೊಂಡವರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯಗೊಳಿಸಿದೆ. ಇದರಿಂದ ದೇಶಾದ್ಯಂತ 17 ಲಕ್ಷ ಶಿಕ್ಷಕರಲ್ಲಿ ಸೇವಾ ಭದ್ರತೆ ಹಾಗೂ ಭವಿಷ್ಯದ ಕುರಿತು ಅಭದ್ರತೆ ಕಾಡುತ್ತಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ರಾಷ್ಟ್ರೀಯ ಶಿಕ್ಷಕ ಪರಿಷತ್ ಆದೇಶದನ್ವಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಿದ್ದಲ್ಲಿ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಲಿವೆ. ಹೀಗಾಗಿ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಲು, ಶಿಕ್ಷಕರ ಸೇವಾ ಹಕ್ಕು, ಹಿರಿತನ, ಬಡ್ತಿ ನಿರೀಕ್ಷೆ ಹಾಗೂ ಇತರ ಕಾನೂನುಬದ್ದ ಪ್ರಯೋಜನ ರಕ್ಷಿಸಲು ಅಗತ್ಯ ಅಡಳಿತಾತ್ಮಕ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರ ಬಿನಾದಾರ

ನಿಯೋಗದ ನೇತೃತ್ವ ವಹಿಸಿದ್ದರು. ಈ ವೇಳೆ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ ರಾಗಾ, ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಜಯಕುಮಾರ ಪಾಟೀಲ ಯರನಳ್ಳಿ ಕಾರ್ಯದರ್ಶಿ ರಮೇಶ ಪಾಟೀಲ, ಖಜಾಂಚಿ ಸಂತೋಷ್ ಮಂಗಳೂರೆ, , ನರಸಾರೆಡ್ಡಿ ಸಂಗಮೇಶ ನೇಳಗೆ, ಸತೀಶ್ ಬಿರಾದಾರ, ಗೋಪಾಲರಾವ್ ಇತರರಿದ್ದರು.