ಬೀದರ: ಈಶ್ವರ ಖಂಡ್ರೆ ಅವರು ಸರಳ ಹಾಗೂ ದಕ್ಷ ಆಡಳಿತಗಾರರು. ಕಲ್ಯಾಣ ಕರ್ನಾಟಕದ ಧ್ವನಿಯಾಗಿರುವ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದು ಈ ಭಾಗದ ಜನರಿಗೆ ಕೊಡುವ ಗೌರವವಾಗಿದೆ. ಈ ಕುರಿತು ರಾಜ್ಯದ ಉನ್ನತ ನಾಯಕರು ತಕ್ಷಣ ಗಮನ ಹರಿಸಬೇಕು ಎಂದು ಬೀದರ್ ಜಿಲ್ಲೆಯ ವಿವಿಧ ಮಠಗಳ ಪೂಜ್ಯ ಮಠಾಧಿಪತಿಗಳು ಜಂಟಿಯಾಗಿ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲೆಯ ಶ್ರೀಗಳು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಮತ್ತು ಸಮುದಾಯಗಳ ಹಿತದೃಷ್ಟಿಯಿಂದ ಈ ನಿರ್ಧಾರ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಮಠಾಧೀಶರ ಪ್ರಮುಖ ಬೇಡಿಕೆಗಳು ಮತ್ತು ಸುದ್ದಿಗೋಷ್ಟಿಯ ಮುಖ್ಯಾಂಶಗಳು:
ಹಿರಿತನಕ್ಕೆ ಗೌರವ: ಈಶ್ವರ ಖಂಡ್ರೆ ಅವರು ಸುದೀರ್ಘ ರಾಜಕೀಯ ಅನುಭವ ಹೊಂದಿದ್ದು, ಪಕ್ಷ ಮತ್ತು ಸರ್ಕಾರದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಅವರ ಹಿರಿತನವನ್ನು ಪರಿಗಣಿಸಿ ಡಿಸಿಎಂ ಸ್ಥಾನ ನೀಡಬೇಕು.
ಕಲ್ಯಾಣ ಕರ್ನಾಟಕಕ್ಕೆ ಪ್ರಾತಿನಿಧ್ಯ: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಖಂಡ್ರೆ ಅವರ ನಾಯಕತ್ವದ ಅಗತ್ಯವಿದೆ. ಅವರಿಗೆ ಡಿಸಿಎಂ ಹುದ್ದೆ ನೀಡುವುದರಿಂದ ಈ ಭಾಗದ ಜನರಲ್ಲಿ ಹೊಸ ಭರವಸೆ ಮೂಡುತ್ತದೆ.
ಸಮುದಾಯದ ಧ್ವನಿ: ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ, ಸರ್ವ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವ ಅವರಿಗೆ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ಮಠಾಧಿಪತಿಗಳು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಗುರುಬಸವ ಪಟ್ಟದೇವರು, ಜಯಶಾಂತಲಿಂಗ ಶಿವಾಚಾರ್ಯರು, ಹಾವಾಗಿಲಿಂಗ ಶಿವಾಚಾರ್ಯರು, ಚೆನ್ನಮಲ್ಲ ಸ್ವಾಮೀಜಿ ಹುಡಗಿ, ಸಿದ್ದೇಶ್ವರ ಶಿವಾಚಾರ್ಯರು, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಹೊನಲಿಂಗ ಸ್ವಾಮಿಜಿ, ಗಂಗಾಧರ ಶಿವಾಚಾರ್ಯರು ಲಾಡಗೇರಿ, ಸಿದ್ದಲಿಂಗ ಶಿವಾಚಾರ್ಯರು, ಚಂದ್ರಶೇಖರ್ ಶಿವಾಚಾರ್ಯರು, ಶಾಂತಲಿಂಗ ಮಹಾಸ್ವಾಮಿಗಳು, ಪ್ರಭು ಕುಮಾರ ಸ್ವಾಮೀಜಿ, ಮರುಳಾರಾಧ್ಯ ಶಿವಾಚಾರ್ಯರು, ಮಹಾಲಿಂಗ ಸ್ವಾಮಿಗಳು, ಗುರುಪ್ರಸಾದ ಸ್ವಾಮಿಗಳು, ಚನ್ನಬಸವ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ಇತರೆ ಮಠಾಧೀಶರು ಇದ್ದರು.