ಬೀದರ: ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಉಪಾಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನಕ್ಕೆ ಅಭಿಷೇಕ್ ಆರ್. ಪಾಟೀಲ್ ಅವರು ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಕುರಿತು ಅವರು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ರೈತರ ಹಿತದೃಷ್ಟಿಯಿಂದ, ವೈಯಕ್ತಿಕ ಕಾರಣಗಳು ಹಾಗೂ ಅನಿವಾರ್ಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ತಮಗೆ ವಹಿಸಲಾಗಿರುವ ಉಪಾಧ್ಯಕ್ಷ/ನಿರ್ದೇಶಕರ ಹುದ್ದೆಯ ಜವಾಬ್ದಾರಿಯನ್ನು ಮುಂದುವರಿಸಲು ಸಾಧ್ಯವಾಗದ ಕಾರಣ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ರಾಜೀನಾಮೆಯನ್ನು ನಿಯಮಾನುಸಾರ ಅಂಗೀಕರಿಸಿ, ಜವಾಬ್ದಾರಿಗಳಿಂದ ಬಿಡುಗಡೆಗೊಳಿಸುವಂತೆ ಕೋರಿರುವ ಅವರು, ಸೇವೆಯ ಅವಧಿಯಲ್ಲಿ ಸಹಕರಿಸಿದ ಬ್ಯಾಂಕಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ಪ್ರಕ್ರಿಯೆ ಬೇಸರ ಮೂಡಿಸಿದೆ. ಜಿಲ್ಲೆಯ ರೈತರ ಜೀವನಾಡಿ ಮತ್ತೆ ಆರಂಭಿಸಬೇಕು ಹಾಗೂ ರೈತರ ಹಿತ ದೃಷ್ಟಿಯಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಅಭಿಷೇಕ್ ಪಾಟೀಲ ತಿಳಿಸಿದ್ದಾರೆ.
